   ಮೂಲದೊಡನೆ ಪರಿಶೀಲಿಸಿ

ಔದಾಸೀನ್ಯ ರೇಖೆಗಳು: ಅನುಭೋಗಿಗಳ ಬೇಡಿಕೆಯನ್ನು ವಿಶ್ಲೇಷಿಸಲು ಅರ್ಥಶಾಸ್ತ್ರದಲ್ಲಿ ಅನುಸರಿಸುವ ಒಂದು ವಿಧಾನ (ಇಂಡಿಫರೆನ್ಸ್‌ ಕವ್ರ್ಸ್‌).  ಬೇಡಿಕೆಯ ದೃಷ್ಟಿಯಿಂದ ಈ ಜಗತ್ತಿನಲ್ಲಿ ಸರಕುಗಳು ವಿರಳವಾಗಿರುವುದರಿಂದ ಪ್ರತಿಯೊಬ್ಬನು ತನಗೆ ಸೂಕ್ತ ಕಂಡಂತೆ ಈ ಸರಕುಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.  ತನ್ನಲ್ಲಿರುವ ಹಣದಿಂದ ಯಾವ ಯಾವ ಸರಕುಗಳನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಕೊಳ್ಳಬೇಕೆಂಬುದನ್ನು ನಿಷ್ಕರ್ಷಿಸಿಕೊಳ್ಳಬೇಕಾಗುತ್ತದೆ.  ಒಬ್ಬ ಅನುಭೋಗಿಗೆ ಎರಡು ಸರಕುಗಳು ಮಾತ್ರವೇ ಲಭ್ಯವಿರುವುದೆಂದು ಭಾವಿಸುವುದಾದರೆ ಅಥವಾ ಆತ ಎರಡು ಸರಕುಗಳನ್ನು ಕೊಳ್ಳಬೇಕೆಂದು ಬಂiÀÄಸುವುದಾದರೆ, ತನ್ನ ಹಣದ ವರಮಾನದಿಂದ ಇವೆರಡನ್ನೂ ಯಾವುದೋ ಒಂದು ಗೊತ್ತಾದ ಪ್ರಮಾಣದಲ್ಲಿ ಕೊಳ್ಳಬೇಕೆಂದು ತೀರ್ಮಾನಿಸುತ್ತಾನೆ.  ಈ ಎರಡು ಸರಕುಗಳ ಈ ಬಗೆಯ ಸಂಯೋಜನೆಯಿಂದ ಅವನಿಗೆ ದೊರಕುವಷ್ಟೇ ತೃಪ್ತಿ ಅಥವಾ ಉಪಯುಕ್ತತೆ ಅವನಿಗೆ ಇವೆರಡನ್ನೂ ಬೇರೆ ಬೇರೆ ಪ್ರಮಾಣದಲ್ಲಿ ಸಂಯೋಜಿಸಿದರೆ ಲಭ್ಯವಾಗಬಹುದು; ಅಥವಾ ಆಗದಿರಬಹುದು.  ಮೊದಲನೆಯ ಬಗೆಯ ಸಂಯೋಜನೆಯಿಂದ ಅವನಿಗೆ ಎಷ್ಟು ತೃಪ್ತಿ ಅಥವಾ ಉಪಯುಕ್ತತೆ ಲಭ್ಯವಾಗುವುದೋ ಅಷ್ಟೇ ಉಪಯುಕ್ತತೆ ಲಭ್ಯವಾಗುವಂತೆ ಈ ಎರಡು ಸರಕುಗಳನ್ನೂ ಬೇರೆ ಬೇರೆ ಪ್ರಮಾಣಗಳಲ್ಲಿ ಸಂಯೋಜಿಸಬಹುದು.  ಹೀಗೆ ಏಕರೀತಿಯ ಉಪಯುಕ್ತತೆ ಲಭ್ಯವಾಗುವಂತೆ ಈ ಎರಡು ಸರಕುಗಳನ್ನೂ ಬೇರೆ ಬೇರೆ ಪ್ರಮಾಣಗಳಲ್ಲಿ ಸಂಯೋಜಿಸಬಹುದು.  ಹೀಗೆ ಏಕರೀತಿಯ ಉಪಯುಕ್ತತೆ ಲಭಿಸುವ ಸಂಯೋಜನೆಗಳನ್ನೆಲ್ಲ ಒಂದು ನಕ್ಷೆಯಲ್ಲಿ ಬಿಂದುಗಳಾಗಿ ಗುರುತಿಸಿ ಆ ಬಿಂದುಗಳನ್ನೆಲ್ಲ ಒಂದು ರೇಖೆಯಾಗಿ ಕೂಡಿಸಬಹುದು. ಆ ರೇಖೆಯ ಮೇಲೆ ಯಾವುದೇ ಬಿಂದುವಿನಿಂದ ಸೂಚಿತವಾಗುವ ಪ್ರಮಾಣಗಳಲ್ಲಿ ಆ ಎರಡು ಸರಕುಗಳನ್ನು ಪಡೆದುಕೊಂಡರೂ ಅವನಿಗೆ ಒಂದೇ ಸಮನಾದ ತೃಪ್ತಿ ಲಭಿಸುವುದರಿಂದ ಆ ರೇಖೆಯಿಂದ ಸೂಚಿತವಾಗುವ ಸಂಯೋಜನೆಗಳೆಲ್ಲ ಒಂದೇ ಎಂಬ ಔದಾಸೀನ್ಯ ಅವನಿಗಿರುವುದರಿಂದ  ಆ ರೇಖೆಗೆ ಔದಾಸೀನ್ಯ ರೇಖೆಯೆಂದು ಹೆಸರು ಬಂದಿದೆ.
ತನಗೆ ಹಣದ ರೂಪದಲ್ಲಿ ಬಂದ ಕ್ಲುಪ್ತ ವರಮಾನದಿಂದ ಒಬ್ಬ ಅನುಭೋಗಿಗೆ ಆಹಾರ ಹಾಗೂ ಬಟ್ಟೆ ಕೊಳ್ಳಬೇಕೆನಿಸಬಹುದು.  ಅವನಲ್ಲಿರುವ ಹಣದಿಂದ ಮೂರು ಕಿಲೋ ಅಕ್ಕಿ ಹಾಗೂ ಎರಡು ಮೀಟರ್ ಬಟ್ಟೆ ಕೊಳ್ಳಬಹುದು ಅಥವಾ ಎರಡು ಕಿಲೋ ಅಕ್ಕಿ ಮತ್ತು ಮೂರು ಮೀಟರ್ ಬಟ್ಟೆ ಕೊಳ್ಳಬಹುದು.  ಇವೆರಡರ ಜೊತೆಗಳಲ್ಲಿ ಮೊದಲನೆಯ ಜೊತೆಯೇ ವಾಸಿಯೆಂದು ಆತ ಭಾವಿಸಬಹುದು; ಅಥವಾ ಎರಡನೆಯದು ವಾಸಿಯೆಂದು ಅವನಿಗೆ ತೋರಬಹುದು; ಇಲ್ಲವೆ ಇವೆರಡು ಬಗೆಯ ಸಂಯೋಜನೆಗಳಲ್ಲಿ ಯಾವುದಾದರೂ ಒಂದೇ ಎಂದೂ ಎನಿಸಬಹುದು.  
ಇವೆರಡು ಸಂಯೋಜನೆಗಳು ಒಂದೇ ಎಂಬುದು ಅವನ ಭಾವನೆಯಾದರೆ, ಆಗ ಇದೇ ರೀತಿ ಎನಿಸುವ ಬೇರೆ ಬೇರೆ ಪ್ರಮಾಣಗಳ ಜೋಡಿಗಳನ್ನೂ ಭಾವಿಸಬಹುದು.  ಹೀಗೆ ಅವನಿಗೆ ಒಂದೇ ಎನಿಸಬಹುದಾದ, ಅವುಗಳಲ್ಲಿ ಯಾವುದಾದರೂ ಸರಿಯೆಂದು ಅವನು ಉದಾಸೀನನಾಗಿರಬಹುದಾದ, ಸಂಯೋಜನೆಗಳನ್ನು ಮುಂದೆ ಕೊಟ್ಟಿದೆ: 
	ಅಕ್ಕಿ		ಬಟ್ಟೆ
	(ಕಿಲೋ)		(ಮೀಟರ್)
	1	...	6
	2	...	3
	3	...	2
	4	...	1 1/2              
ಈ ಪಟ್ಟಿಯಲ್ಲಿ ಕೊಟ್ಟಿರುವ ಜೋಡಿಗಳನ್ನೇ ನಕ್ಷೆಯ ರೂಪದಲ್ಲಿ ತೋರಿಸಬಹುದು (ನಕ್ಷೆ 1):

ಹಿಂದಿನ ಯಾದಿಯಲ್ಲಿ ಕೊಟ್ಟಿರುವ ನಾಲ್ಕು ಸಂಯೋಜನೆಗಳು ಮೇಲಿನ ನಕ್ಷೆಯಲ್ಲಿ ಂ,ಃ,ಅ,ಆ ಎಂಬ ಬಿಂದುಗಳು.  ಈ ಬಿಂದುಗಳನೆಲ್ಲ ಸೇರಿಸಿ ಎಳೆದ ರೇಖೆಯೇ ಔದಾಸೀನ್ಯ ರೇಖೆ. ಈ ಔದಾಸೀನ್ಯ ರೇಖೆಯ ಮೇಲೆ ಯಾವ ಬಿಂದುವನ್ನೇ ತೆಗೆದುಕೊಂಡರೂ ಆ ಬಿಂದುವಿನಿಂದ ಸೂಚಿತವಾಗುವ ಪ್ರಮಾಣದಲ್ಲಿ ಅಕ್ಕಿ ಹಾಗೂ ಬಟ್ಟೆಯನ್ನು ಕೊಂಡರೂ ಅವನಿಗೆ ಒಂದು ಎನಿಸುತ್ತದೆ.  ಈ ರೇಖೆಯಿಂದ ಸೂಚಿತವಾಗುವ ಸಂಯೋಜನೆಗಳನ್ನು ಅವನ ಮುಂದೆ ಇಟ್ಟರೆ ಅವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಲು ಆತ ಅಶಕ್ತ.
ಈ ಔದಾಸೀನ್ಯ ರೇಖೆಯ ಕೆಲವು ಲಕ್ಷಣಗಳನ್ನು ಇಲ್ಲಿ ಗಮನಿಸಬೇಕು.  ಇದು ಎಡದಿಂದ ಬಲಕ್ಕೆ ಇಳುಕಲಾಗುತ್ತ ಹೋಗುತ್ತದೆ.  ಮೂಲ ಬಿಂದುವಿನ (ಔ) ಕಡೆಗೆ ಉಬ್ಬಿದೆ; ಅಥವಾ ಮೇಲಿಂದ ನೋಡುವುದಾದರೆ ತಗ್ಗಿದೆ. ಈ ರೇಖೆಯ ಇಳಿಜಾರು ಮುಂದೆ ಕಡಿಮೆಯಾಗುತ್ತ ಹೋಗುತ್ತದೆ.  ತಳದ ರೇಖೆಗೆ ಸಮಾನಾಂತರವಾಗುವ ಪ್ರವೃತ್ತಿ ತೋರುತ್ತದೆ.  ಅನುಭೋಗಿ ತನ್ನ ನಿಯಮಿತ ವರಮಾನದಲ್ಲಿ ಎರಡು ಬದಲಿ ಸರಕುಗಳನ್ನು (ಸಬ್ಸ್‌ಟಿಟ್ಯೂಟ್ಸ್‌) ಬಳಸುವಾಗ ಒಂದು ವಸುವಿನ ಪ್ರಮಾಣವನ್ನು ಹೆಚ್ಚಿಸುತ್ತ ಹೋದಂತೆಲ್ಲ ಮತ್ತೊಂದು ಸರಕಿನ ಪ್ರಮಾಣವನ್ನು ಕಡಿಮೆ ಮಾಡುತ್ತ ಹೋಗಬೇಕಾಗುತ್ತದೆ. ಒಂದು ಸರಕು ವಿರಳವಾದಂತೆಲ್ಲ ಇನ್ನೊಂದು ಸರಕಿನ ದೃಷ್ಟಿಯಲ್ಲಿ ಮೊದಲನೆಯ ಸರಕಿನ ಪ್ರತಿನಿಧಾನದ ಮೌಲ್ಯ ಹೆಚ್ಚುತ್ತದೆ. ಹೆಚ್ಚು ವಿರಳವಾದ ಸರಕಿನ ಪರಿಸರದ ಉಪಯುಕ್ತತೆ ಹೆಚ್ಚು ಯಥೇಚ್ಛವಾಗಿರುವ ಸರಕಿನ ಪರಿಸರದ ಉಪಯುಕ್ತತೆಯ ದೃಷ್ಟಿಯಲ್ಲಿ ಅಧಿಕವಾಗುತ್ತದೆ. ಮೊದಲನೆಯ ನಕ್ಷೆಯಲ್ಲಿ ಕೊಟ್ಟಿರುವ ರೇಖೆಯ ಮೇಲೆ (ಂ) ಬಿಂದುವಿನಲ್ಲಿ  ಸೂಚಿತವಾಗಿರುವ ಸನ್ನಿವೇಶದಲ್ಲಿ ಇನ್ನೊಂದು ಕಿಲೋ ಅಕ್ಕಿ ಪಡೆಯುವುದಕ್ಕಾಗಿ ಆರು ಮೀಟರ್ ಬಟ್ಟೆಯಲ್ಲಿ ಮೂರು ಮೀಟರನ್ನೆ ಬಿಟ್ಟುಕೊಡಲು ಅನುಭೋಗಿ ಸಿದ್ಧನಾಗಿರುತ್ತಾನೆ.  ಆದರೆ ಃ ಬಿಂದುವಿಗೆ ಬರುವ ವೇಳೆಗೆ ಇನ್ನೊಂದು ಕಿಲೋ ಅಕ್ಕಿಗಾಗಿ ಒಂದು ಮೀಟರ್ ಬಟ್ಟೆ ಮಾತ್ರ ಬಿಟ್ಟುಕೊಟಲು ಆತ ಸಿದ್ಧ.  ಅ ಗೆ ಬರುವ ವೇಳೆಗೆ ಆತ ಮತ್ತೊಂದು ಕಿಲೋ ಅಕ್ಕಿಗಾಗಿ ಕೇವಲ 1/2 ಮೀಟರ್ ಬಟ್ಟೆ ಬಿಡಲು ತಯಾರು.  ಬಟ್ಟೆ ಆ ವೇಳೆಗೆ ಅವನಲ್ಲಿ ಬಹಳ ವಿರಳವಾಗಿರುವುದರಿಂದ ಅವನಿಗೆ ಅದರ ಸಾಪೇಕ್ಷ ಉಪಯುಕ್ತತೆ ಬಹಳ ಹೆಚ್ಚು.  ಈ ನಕ್ಷೆಯಲ್ಲಿ ಂ ಗೂ ಃ ಗೂ ನಡುವಿನ ಇಳುಕಲಿನ ಅಳತೆ 3;  ಃ ಗೂ ಅಗೂ ನಡುವಿನ ಇಳುಕಲು 1 ಮಾತ್ರ; ಅಗೂ ಆಗೂ ನಡುವೆ ಇರುವ ಇಳುಕಲು ಕೇವಲ 1/2.  ಅಕ್ಕಿಗೂ ಬಟ್ಟೆಗೂ ನಡುವಣ ಪ್ರತಿನಿಧಾನದ ಗತಿಯನ್ನು ಹೀಗೆ ಅಳೆಯಬಹುದು.  ಇದನ್ನೇ ಹೀಗೆ ತೋರಿಸಬಹುದು:

ಸಂಯೋಜನೆ	ಬಟ್ಟೆ	ಅಕ್ಕಿ		ಬದಲಿಸುವ (ಪ್ರತಿನಿಧಾನದ)
			(ಮೀಟರು)	(ಕಿಲೋ)		ಪ್ರಮಾಣ (ಬಟ್ಟೆ : ಅಕ್ಕಿ)   
	ಂ	...	6	1	...	3 : 1
	ಃ	...	3	2	...	1 : 1
	ಅ	...	2	3	...	1/2 :1
	ಆ	...	1 1/2	4	...	                          
ನಕ್ಷೆ 1 ರಲ್ಲಿ ತೋರಿಸಿರುವ ಔದಾಸೀನ್ಯ ರೇಖೆಯಲ್ಲಿ ಒಂದು ಕಿಲೋ ಅಕ್ಕಿ ಮತ್ತು ಆರು ಕಿಲೋ ಬಟ್ಟೆಯ ಸಂಯೋಜನೆಯಿಂದ ಒಬ್ಬ ಅನುಭೋಗಿಗೆ ಲಭ್ಯವಾಗುವ ಉಪಯುಕ್ತತೆಯನ್ನು ಗುರುತಿಸಿ, ಅಷ್ಟೇ ಉಪಯುಕ್ತತೆ ಲಭ್ಯವಾಗುವ ನಾನಾ ಸಂಯೋಜನೆಗಳನ್ನು ಸೂಚಿಸುವ ರೇಖೆಯನ್ನು ರಚಿಸಿದೆ.  1 ಕಿಲೋ ಅಕ್ಕಿ ಮತ್ತು 6 ಮೀಟರ್ ಬಟ್ಟೆಯಿಂದ ಆರಂಭಿಸುವ ಬದಲು 2 ಕಿಲೋ ಅಕ್ಕಿ ಮತ್ತು 7 ಮೀಟರ್ ಬಟ್ಟೆಯಿಂದಾಗಲಿ, 3 ಕಿಲೋ ಅಕ್ಕಿ ಮತ್ತು 7 ಮೀಟರ್ ಬಟ್ಟೆಯಿಂದಾಗಲಿ ಆರಂಭಿಸಬಹುದು.  ಈ ಒಂದೊಂದು ಜೋಡಿಯಿಂದಲೂ ಒಂದೊಂದು ಪ್ರಮಾಣದ ಉಪಯುಕ್ತತೆ ಅನುಭೋಗಿಗೆ ಲಭ್ಯವಾಗುತ್ತದೆ.  ಅಷ್ಟಷ್ಟೇ ಉಪಯುಕ್ತತೆಗಳಿರುವ ನಾನಾ ಸಂಯೋಜನೆಗಳನ್ನು ಗುರುತಿಸಿ ಅವುಗಳನ್ನೂ ನಕ್ಷೆಯ ಮೇಲೆ ತೋರಿಸಬಹುದು.  ಆಗ ಈ ಔದಾಸೀನ್ಯ ರೇಖೆಗಳು ಹೀಗೆ ಕಾಣುತ್ತದೆ.
ಈ ರೇಖೆಗಳಲ್ಲಿ I 3 ಎಂಬುದು ನಕ್ಷೆ 1ರಲ್ಲಿ ಕೊಟ್ಟಿರುವ ರೇಖೆ.  ಈ ರೇಖೆಗಳಲ್ಲಿ ಒಂದೊಂದು ಒಂದೊಂದು ಪ್ರಮಾಣದ ತೃಪ್ತಿಯನ್ನು ನೀಡುವ ಸಂಯೋಜನೆಗಳನ್ನು ಸೂಚಿಸುತ್ತವೆ. ಒಂದು ರೇಖೆಯ ಮೇಲೆ ಎಲ್ಲೇ ಆದರೂ ಒಂದೇ ರೀತಿಯ ತೃಪ್ತಿ ದೊರಕುತ್ತದೆ. ನಕ್ಷೆಯಲ್ಲಿ ಸೂಚಿತವಾಗಿರುವ ಎರಡು ಸರಕುಗಳನ್ನು ಹೆಚ್ಚಿಸಿದಂತೆಲ್ಲ ತೃಪ್ತಿಯ ಮಟ್ಟ ಏರುತ್ತ ಹೋಗುತ್ತದೆ.  ನಕ್ಷೆ 2ರಲ್ಲಿ ಇದನ್ನು ಕಾಣಬಹುದು. I1 ಕ್ಕಿಂತ I2 ರ ತೃಪ್ತಿಯ ಮಟ್ಟ ಹೆಚ್ಚು.  ಅದಕ್ಕಿಂತ ಹೆಚ್ಚಿನವು I3, I4 ... ಹೀಗೆ.  ಔ ಬಿಂದುವಿನಿಂದ ಆರಂಭಿಸಿ ಈಶಾನ್ಯದಿಕ್ಕಿಗೆ ಸಾಗಿದಂತೆಲ್ಲ ಹಲವಾರು ಔದಾಸೀನ್ಯ ರೇಖೆಗಳನ್ನು ದಾಟಿ ಹೋಗಬೇಕಾಗುತ್ತದೆ.

ಒಬ್ಬ ಅನುಭೋಗಿ ತನ್ನ ನಿಯಮಿತ ವರಮಾನದಿಂದ ಈ ಎರಡು ಸರಕುಗಳನ್ನೂ ಯಾವುದೇ ಒಂದು ಪ್ರಮಾಣದಲ್ಲಿ  ಕೊಂಡರೆ ಮಾತ್ರವೇ  ಅವನಿಗೆ ಪರಮ ತೃಪ್ತಿ  ಅಥವಾ ಉಪಯುಕ್ತತೆ  ಲಭಿಸುತ್ತದೆ.  ಇಂಥ ಸ್ಥಿತಿಯೇ ಸಮತೋಲ ಸ್ಥಿತಿ (ಈಕ್ವಿಲಿಬ್ರಿಯಂ ಪೊಸಿಷನ್). ಅವನ ವರಮಾನದಿಂದ ಈ ಎರಡು ಸರಕುಗಳನ್ನು ಎಷ್ಟೆಷ್ಟು ಕೊಳ್ಳುವುದು ಸಾಧ್ಯವೆಂಬುದನ್ನು ಪಟ್ಟಿಮಾಡಿ ಆ ಸಾಧ್ಯತೆಗಳನ್ನೆಲ್ಲ ನಕ್ಷೆಯ ಮೇಲೆ ಗುರುತಿಸಬಹುದು.  ಹೀಗೆ ಎಳೆದ (ಸರಳ) ರೇಖೆಯ ಮೇಲೆ ಸಾಗಿದರೆ ಅದು ಔ ಬಿಂದುವಿನಿಂದ ಸಾಧ್ಯವಾದಷ್ಟು ಹೆಚ್ಚು ದೂರದಲ್ಲಿ — ಅತ್ಯಂತ ಹೆಚ್ಚಿನ ತೃಪ್ತಿ ಕೊಡಬಲ್ಲ-ಔದಾಸೀನ್ಯ (ವಕ್ರ) ರೇಖೆಯನ್ನು ಎಲ್ಲಿ ಸೋಕುವುದೋ ಆ ಸ್ಪರ್ಶಬಿಂದುವೇ (ಟ್ಯಾಂಜೆಂಟ್ ಪಾಯಿಂಟ್) ಆ ಬೆಲೆ ಹಾಗೂ ವರಮಾನಗಳ ಮಟ್ಟದಲ್ಲಿ ಸಾಧ್ಯವಿರುವ ಸಮತೋಲ ಸ್ಥಿತಿ.

ನಕ್ಷೆ 1 ಮತ್ತು 2 ರಲ್ಲಿ ತೋರಿಸಿರುವ ಸರಕುಗಳಿಗೆ ಸಂಬಂಧಿಸಿದಂತೆ ಇದನ್ನು ಹೀಗೆ ವಿವರಿಸಬಹುದು: ಒಬ್ಬನಿಗೆ ದಿನಕ್ಕೆ ಆರು ರೂಪಾಯಿ ವರಮಾನವಿದ್ದು, ಅಕ್ಕಿ ಕಿಲೋಗೆ ಒಂದೂವರೆ ರೂಪಾಯಿಯೂ ಬಟ್ಟೆ ಮೀಟರಿಗೆ ಒಂದು ರೂಪಾಯಿಯೂ ಇದ್ದರೆ ಆಗ ಆತ ತನ್ನ ವರಮಾನದಿಂದ ನಾಲ್ಕು ಕಿಲೋ ಅಕ್ಕಿಯನ್ನೇ ಕೊಳ್ಳುವುದು ಸಾಧ್ಯ P; ಅಥವಾ ಆರು ಮೀಟರ್ ಬಟ್ಟೆಯನ್ನೆ ಕೊಳ್ಳಬಹುದು.  ಕಿ ಈ ಎರಡು ಪರಮಾವಧಿಗಳ ನಡುವೆ, ತನ್ನಲ್ಲಿರುವ ಹಣದ ಒಂದು ಭಾಗದಿಂದ ಅಕ್ಕಿಯನ್ನೂ ಉಳಿದ ಭಾಗದಿಂದ ಬಟ್ಟೆಯನ್ನೂ ನಾನಾ ಪ್ರಮಾಣಗಳಲ್ಲಿ ಕೊಳ್ಳಬಹುದು.  P ಮತ್ತು ಕಿ ಬಿಂದುಗಳನ್ನು ಸೇರಿಸಿ ಎಳೆದ ರೇಖೆಯೇ ಬೆಲೆ ವರಮಾನ ರೇಖೆ (ಪ್ರೈಸ್-ಇನ್ಕಂ ಲೈನ್) ಅಥವಾ ಅನುಭೋಗ ಸಾಧ್ಯತೆಯ ರೇಖೆ (ಕನ್ಸಂಪ್ಷನ್ ಪಾಸಿಬಿಲಿಟಿ ಲೈನ್).  ಇದೇ ಅವನ ಬಜೆಟ್ ರೇಖೆ.

ನಕ್ಷೆ 4ರಲ್ಲಿ Pಔ ರೇಖೆ I1 ಮತ್ತು I2 ಔದಾಸೀನ್ಯ ರೇಖೆಗಳನ್ನು ಹಾದು ಹೋಗುತ್ತದೆ.  I3 ರೇಖೆಯನ್ನು ಇ ಎಂಬಲ್ಲಿ ಸ್ಪರ್ಶಿಸುತ್ತದೆ.  ಈ ಮೂರು ರೇಖೆಗಳಲ್ಲಿ ಅತ್ಯಂತ ಬಲಗಡೆಗೆ ಅತ್ಯಂತ ಎತ್ತರದ ಔದಾಸೀನ್ಯ ರೇಖೆ ಯಾವುದೋ ಆ ರೇಖೆಯನ್ನು I3 ಸ್ಪರ್ಶಿಸುವ ಅನುಭೋಗಿಗೆ ಆತನ ವರಮಾನದಿಂದ (ಆ ಬೆಳೆಗಳಲ್ಲಿ) ಪರಮಾವಧಿ ತೃಪ್ತಿ ಸಾಧ್ಯ.  ಈ ಬಿಂದುವೇ ಅನುಭೋಗಿಯ ಸಮತೋಲ ಸ್ಥೀತಿಯನ್ನು ತೋರಿಸುತ್ತದೆ.
ಅನುಭೋಗಿಯ ಸಮತೋಲ ಸ್ಥಿತಿ ಯಾವಾಗಲೂ ಸ್ಥಿರವಾಗಿರುವುದಿಲ್ಲ.  ಕೆಳಗಿನ ಸಂದರ್ಭಗಳಲ್ಲಿ ಅವನ ಸಮತೋಲ ಸ್ಥಿತಿಯಲ್ಲಿ ವ್ಯತ್ಯಾಸವಾಗುವುದುಂಟು:

1. ಅನುಭೋಗಿಯ ವರಮಾನ ಸ್ಥಿರವಿದ್ದು ಆತ ಬಳಸುವ ಸರಕುಗಳ ಬೆಲೆಗಳಲ್ಲಿ ವ್ಯತ್ಯಾಸವಾದಾಗ: (ಚಿ) ಬೆಲೆಹೆಚ್ಚಿದಾಗ ಕೆಳಮಟ್ಟದ ಔದಾಸೀನ್ಯರೇಖೆಯ ಮೇಲೆ ಸಮತೋಲ ಸ್ಥಿತಿ ಏರ್ಪಡುತ್ತದೆ (b) ಬೆಲೆ ಇಳಿದಾಗ ಮೇಲ್ಮಟ್ಟದ ಔದಾಸೀನ್ಯ ರೇಖೆಯ ಮೇಲೆ ಸಮತೋಲ ಸ್ಥಿತಿ ಏರ್ಪಡುತ್ತದೆ.
2. ಸರಕುಗಳ ಬೆಲೆಗಳು ಸ್ಥಿರವಿದ್ದು ಅನುಭೋಗಿಯ ವರಮಾನದಲ್ಲಿ ವ್ಯತ್ಯಾಸವಾದಾಗ (ಚಿ) ವರಮಾನ ಹೆಚ್ಚಿದಾಗ ಮೇಲ್ಮಟ್ಟದ ಔದಾಸೀನ್ಯ ರೇಖೆಯ ಮೇಲೆ ಸಮತೋಲ, (b) ವರಮಾನ ತಗ್ಗಿದಾಗ ಕೆಳಮಟ್ಟದ ಔದಾಸೀನ್ಯ ರೇಖೆಯ ಮೇಲೆ ಸಮತೋಲ.
ಹೀಗೆ ಸರಕುಗಳ ಬೇರೆ ಬೇರೆ ಬೆಲೆಗಳ ಮಟ್ಟದಲ್ಲಿ ಅನುಭೋಗಿ ಪಡೆಯುವ ಬೇರೆ ಬೇರೆ ಸಮತೋಲ ಸ್ಥಿತಿಗಳ ಮೇಲಿಂದ (ಎಂದರೆ ಅವನು ಕೊಳ್ಳುವ ಸರಕುಗಳ ಪ್ರಮಾಣಗಳಿಂದ) ಅವನ ಬೇಡಿಕೆಯ ರೇಖೆಯನ್ನು ಕಂಡುಹಿಡಿಯುವುದು ಸಾಧ್ಯ  (ನೋಡಿ- ಬೇಡಿಕೆ).

ವ್ಯಕ್ತಿಯ ಬೇಡಿಕೆಯ ಸಿದ್ಧಾಂತವನ್ನು ವಿವರಿಸಲು ಈ ಔದಾಸೀನ್ಯ ರೇಖೆಯ ವಾದಸರಣಿಯನ್ನು ಮಂಡಿಸಿದಾತ ಜೆ.ಆರ್.ಡಿ. ಆಲೆನ್ ಎಂಬ ಆಧುನಿಕ ಅರ್ಥಶಾಸ್ತ್ರಜ್ಞ. ಇವನ ಈ ವಿಶ್ಲೇಷಣೆ ಆಲ್ಫ್ರೆಡ್ ಮಾರ್ಷಲ್ ಮಂಡಿಸಿದ ಎಲ್ಲರಿಗೂ ಒಂದೇ ಸಮನಾಗಿರುವುದಿಲ್ಲ. ಪ್ರತಿಯೊಬ್ಬರೂ ಒಂದಕ್ಕಿಂತ ಹೆಚ್ಚು ಸರಕುಗಳನ್ನು ಬಳಸುತ್ತಾರೆ. ಆತ ಅನುಭೋಗಿಸುವ ಸರಕುಗಳನ್ನು ಯಾವ ಪ್ರಮಾಣದಲ್ಲಿ ಸಂಯೋಜಿಸಿದರೆ ಅದರಿಂದ ಎಷ್ಟು ತೃಪ್ತಿ ಲಭಿಸಬಹುದೆಂಬುದನ್ನು ಹೋಲಿಕೆಯ ವಿಧಾನದಿಂದ ತಿಳಿಯಬಹುದಲ್ಲದೆ ಆ ತೃಪ್ತಿಯನ್ನೇ ನಿರ್ದಿಷ್ಟವಾಗಿ ಅಳೆಯುವುದು ಸಾಧ್ಯವಿಲ್ಲವೆಂಬ ವಾದದ ಮೇಲೆ ಈ ವಿಶ್ಲೇಷಣೆಯ ವಿಧಾನವನ್ನು ಅಳವಡಿಸಲಾಗಿದೆ.	(ಕೆ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ